ದೇವೇಗೌಡ, ಹೆಚ್ ಜಿ
(1933- ). ಪ್ರಧಾನಿಪಟ್ಟವೇರಿದ ಮೊಟ್ಟಮೊದಲ ಕನ್ನಡಿಗರು. ಜೂನ್ 1, 1996ರಂದು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ. ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಮಾರ್ಚ್ 31, 1997, ದೇವೇಗೌಡ ನೇತೃತ್ವದ ಸಂಯುಕ್ತರಂಗ ಸರ್ಕಾರಕ್ಕೆ ಕಾಂಗ್ರೆಸ್ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದರು; 11ನೇ ಏಪ್ರಿಲ್ ಲೋಕಸಭೆಯಲ್ಲಿ ವಿಶ್ವಾಸ ಮತ ಪಡೆಯುವುದರಲ್ಲಿ ದೇವೇಗೌಡ ವಿಫಲರಾಗಿ, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. 11 ತಿಂಗಳ ಕಾಲ ಪ್ರಧಾನಿಯಾಗಿದ್ದರು. ಈಗ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಹಾಗೂ ರಾಷ್ಟ್ರಕಾರಣದಲ್ಲಿ ಇನ್ನೂ ಸಕ್ರಿಯ. 

ಪ್ರಧಾನಿ ಪಟ್ಟಕ್ಕೆ ಅವರೇನೂ ಪ್ರಯತ್ನಿಸಲಿಲ್ಲ. ಅನಾಯಸವಾಗಿ ಸಂಯುಕ್ತರಂಗದ,-ಕಾಂಗ್ರೆಸ್ಸೇತರ, ಬಿಜೆಪಿ ಏತರ-ಮೂರನೇರಂಗದ ನಾಯಕರಾಗಿ ಅವರು ಆಯ್ಕೆಯಾದರು. ದೇಶದ 11ನೇ ಪ್ರಧಾನಿಯಾಗಲು ಮೇ 30, 1996ರಂದು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. 

ರೈತನಾಯಕ, ಮಣ್ಣಿನಮಗ, ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರ ಜನನ ಮೇ 18, 1933-ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕು ಹರದನಹಳ್ಳಿಯಲ್ಲಿ. ತಂದೆ ದೋಡ್ಡೇಗೌಡ, ತಾಯಿ ದೇವಮ್ಮ. ಅತಿ ಸಾಮಾನ್ಯ ಕೃಷಿಕರ ಕುಟುಂಬ. ಆ ಬಗ್ಗೆ ಈಗಲೂ ದೇವೇಗೌಡರಿಗೆ ಸದಭಿಮಾನ. ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾಭ್ಯಾಸ. ರಾಜಕಾರಣಕ್ಕೆ ಧುಮುಕುವ ಮೊದಲು ಸಣ್ಣಪುಟ್ಟ ಕಾಂಟ್ರಾಕ್ಟ್ ವೃತ್ತಿ. ಹಾಸನಜಿಲ್ಲೆ ಹಿರಿಯ ಕಾಂಗ್ರೆಸ್ ರಾಜಕಾರಣಿ ಎ.ಜಿ. ರಾಮಚಂದ್ರರಾಯರಿಂದ ರಾಜಕೀಯ ದೀಕ್ಷೆ. ವಿಧಾನಸಭೆ ಚುನಾವಣೆಗೆ ನಿಲ್ಲಲು ತಾಕೀತು. ನಿಜಲಿಂಗಪ್ಪನವರಿಂದ ಕಾಂಗ್ರೆಸ್ ಟಿಕೆಟ್ ನಿರಾಕರಣೆ; ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ರಾಯರ ಉಮೇದು. 28ರ ಹರೆಯದ ದೇವೇಗೌಡ 1962ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶ. ಸದನದಲ್ಲಿ ಪ್ರಭಾವಿ ಭಾಷಣಕಾರ; ಎಲ್ಲರಿಂದ ಮೆಚ್ಚುಗೆಗೆ ಪಾತ್ರ. ಹೊಳೇನರಸೀಪುರದಿಂದಲೇ ಪುನಃ ಪುನಃ ಇನ್ನೂ 3 ಬಾರಿ 1967-71ರಲ್ಲಿ, 1972-77ರಲ್ಲಿ, 1978-83ರಲ್ಲಿ ವಿಧಾನಸಭೆಗೆ ಆಯ್ಕೆ. ಮಾರ್ಚ್ 1972ರಿಂದ ಮಾರ್ಚ್ 1976ರವರೆಗೆ, ಹಾಗೂ ನವೆಂಬರ್ 1976ರಿಂದ ಡಿಸೆಂಬರ್ 1977ರ ವರೆಗೆ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರು. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಸಂಸ್ಥಾ ಕಾಂಗ್ರೆಸ್‍ನಲ್ಲಿ ಉಳಿದರು. 1974ರ ಲೋಕಸಭಾ ಚುನಾವಣಾನಂತರ ಪ್ರತಿಪಕ್ಷ ನಾಯಕ. ನವೆಂಬರ್ 22, 1982ರಂದು ಆರನೆ ವಿಧಾನಸಭೆ ಸದಸ್ಯತ್ವಕ್ಕೆ ಅವರು ರಾಜೀನಾಮೆ ಕೊಟ್ಟರು. ಹೆಗಡೇ ನೇತೃತ್ವದ ಜನತಾ-ಕ್ರಾಂತಿರಂಗ ಸರ್ಕಾರಗಳಲ್ಲಿ ಏಳನೆ ಹಾಗೂ ವಿಧಾನಸಭೆಗಳಲ್ಲಿ ನೀರಾವರಿ ಹಾಗೂ ಲೋಕೋಪಯೋಗಿ ಸಚಿವರಾಗಿ ಗಮನಾರ್ಹ ಸೇವೆ. ಇವರು ನೀರಾವರಿ ಸಚಿವರಾಗಿದ್ದ ಕಾಲದಲ್ಲಿ ರಾಜ್ಯದ ಹಲವಾರು ನೀರಾವರಿ ಯೋಜನೆಗಳು ಫಲ ಕೊಡಲಾರಂಭಿಸಿದವು. 1987ರಲ್ಲಿ ನೀರಾವರಿಗೆ ಸಾಕಷ್ಟು ಹಣ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದರು. 

1975-76ರಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಸೆರೆಮನೆ ವಾಸ. ವ್ಯಾಪಕ ಅಧ್ಯಯನ ಹಾಗೂ ಹಿರಿಯ ರಾಜಕಾರಣಿಗಳ ಜತೆ ಸಂವಾದ ಈ ಸಮಯದಲ್ಲಿ ದೇವೇಗೌಡರ ರಾಜಕೀಯ ನೋಟ ಸ್ಪಷ್ಟವಾಗಲು ಸಹಾಯಕ. 1991ರಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ. ರಾಜ್ಯದಲ್ಲಿ 2 ಬಾರಿ ಜನತಾ ಪಕ್ಷದ ಅಧ್ಯಕ್ಷ. 1994ರಲ್ಲಿ ಜನತಾದಳದ ಅಧ್ಯಕ್ಷ. ಆ ಬಾರಿ ಜನತಾದಳ ಮತ್ತೆ ಅಧಿಕಾರಕ್ಕೆ ಬರಲು ದೇವೇಗೌಡರ ಪರಿಶ್ರಮವೇ ಕಾರಣ. ಡಿಸೆಂಬರ್ 11,1994 ಜನತಾದಳ ಶಾಸಕಾಂಗ ಪಕ್ಷದ ಆಯ್ಕೆ. ತನ್ಮೂಲಕ ಕರ್ನಾಟಕದ 14ನೇ ಮುಖ್ಯಮಂತ್ರಿ ಆದರು. ಆ ಮೇಲೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಭಾರಿ ಬಹುಮತದೊಡನೆ ವಿಧಾನ ಸಭೆಗೆ ಆಯ್ಕೆ ಆದರು. ರಾಜಕೀಯ ದೇವೆಗೌಡರ ಉಸಿರು. ಜನಗಳ ಜತೆ ಸುಲಭವಾಗಿ ಬೆರೆಯಬಲ್ಲ ರಾಜಕಾರಿಣಿ. ಸಂಸತ್ತಿನಲ್ಲಿ ರೈತರ ಬವಣೆ ಬಿಂಬಿಸುವುದರಲ್ಲಿ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುವುದಿಲ್ಲ. ಕನಕಪುರ ಕ್ಷೇತ್ರದಿಂದಲೂ ಮರು ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿದ್ದರು. 2004ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹಾಸನ ಹಾಗೂ ಕನಕಪುರ ಕ್ಷೇತ್ರಗಳಿಂದ ಲೋಕಸಭೆಗೆ ಸ್ಪರ್ಧೆ. ಹಾಸನದಲ್ಲಿ ಗೆದ್ದು ಕನಕಪುರದಲ್ಲಿ ಸೋತರು. 

ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲ. ಕಾಂಗ್ರೆಸ್ ಜತೆ ಸೇರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದರು. ತಮ್ಮ ಪಕ್ಷದ ಸಿದ್ಧರಾಮಯ್ಯನವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರಕಿಸಿ ಕೊಟ್ಟರು. ಆದರೆ ಸಿದ್ಧರಾಮಯ್ಯ ಹಾಗೂ ದೇವೇಗೌಡ ಮೈತ್ರಿ ಅಹಿಂದ್ ಸಮಾವೇಶಗಳಿಂದಾಗಿ ಹಳಸಿಕೊಂಡಿತು. ಸಿದ್ಧರಾಮಯ್ಯ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಸಮ್ಮಿಶ್ರಸರ್ಕಾರದ ಪ್ರಯೋಗಕ್ಕೆ ಎಚ್.ಡಿ.ದೇವೆಗೌಡ ಅವರೇ ಸೂತ್ರಧಾರಿ. ಸರಳ ಆದರೆ ದಿಟ್ಟ ಪ್ರತಿಪಾದನೆಯ ವ್ಯಕ್ತಿತ್ವ. ರಾಜಕೀಯದ ಏಳು ಬೀಳುಗಳನ್ನು ಉಂಡವರು. ಎಲ್ಲ ಅಭಿಪ್ರಾಯಗಳನ್ನೂ ಆಲಿಸುವ ಸಹನೆ ಹಾಗೂ ಸೌಜನ್ಯ 1989ರಲ್ಲಿ ಜನತಾ ಪಕ್ಷಕ್ಕೆ ಕೇವಲ 2 ಸ್ಥಾನ. ಹಾಗೂ ಖುದ್ದು ದೇವೇಗೌಡರು ತಮ್ಮ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತ ಬಗೆ. ಪುನಃ ಅಗ್ನಿ ಪಕ್ಷಿಯಂತೆ ಮೇಲೆದ್ದು ಬರಲು ಕಾರಣವಾಯಿತು. 								        
(ಕೆ.ಎಸ್.ಅಚ್ಯುತನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ